ನಮ್ಮ ಶಾಲೆಗಳಲ್ಲಿ ಮುಖ ಗುರುತಿಸುವಿಕೆ ತಂತ್ರಜ್ಞಾನ ಅಗತ್ಯವೇ?

ಕರ್ನಾಟಕ ಶಾಲಾ ಶಿಕ್ಷಣ ಇಲಾಖೆ ಇತ್ತೀಚೆಗೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಹಾಗು ಮೊಬೈಲ್ ಆಧಾರಿತ ಮುಖ ಗುರುತಿಸುವಿಕೆ ವ್ಯವಸ್ಥೆಯೊಂದನ್ನು (Facial Recognition System) ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಜಾರಿಗೆ ತರುವುದಾಗಿ ಘೋಷಿಸಿದೆ. ಈ ವ್ಯವಸ್ಥೆಯು ಈಗಾಗಲೇ ಬಳಸಲಾಗುತ್ತಿರುವ SATSಗೆ ಜೋಡಣೆಯಾಗಿದ್ದು, ಶಾಲೆಗಳಲ್ಲಿ ಹಾಜರಾತಿ, ಹಾಗು, ಬಿಸಿ ಊಟದಂತಹ ಇತರ ಸರ್ಕಾರೀ ಯೋಜನೆಗಳ ಫಾಲಾನುಭವಿಗಳ ಸರಿಯಾದ ಮಾಹಿತಿ ಸಂಗ್ರಹಿಸುವ ಉದ್ದೇಶದೊಂದಿಗೆ ಇದೇ ಶೈಕ್ಷಣಿಕ ವರ್ಷದಲ್ಲಿ ಅನುಷ್ಠಾನಗೊಳ್ಳಲಿದೆ.

ಮೇಲ್ನೋಟಕ್ಕೆ ಇದು ದಕ್ಷತೆ ಹಾಗು ಹೊಣೆಗಾರಿಕೆ ಹೆಚ್ಚಿಸುವತ್ತ ತೆಗೆದುಕೊಂಡಿರುವ ಒಂದು ಹೆಜ್ಜೆಯಾಗಿ ಕಾಣಬಹುದಾದರೂ, ಕೂಲಂಕುಶವಾಗಿ ವಿಶ್ಲೇಷಿಸಿದಾಗ, ಭದ್ರತೆ, ಗೌಪ್ಯತೆ ಹಾಗು ಶಿಕ್ಷಣದಲ್ಲಿ ತಂತ್ರಜ್ಞಾನದ ಪಾತ್ರದ ಕುರಿತು ಹಲವು ಗಂಭೀರ ಪ್ರಶ್ನೆಗಳು ಮೂಡಿ ಬರುತ್ತವೆ. ಯಾವುದೇ ಹೊಸ ತಂತ್ರಜ್ಞಾನವನ್ನು ಜಾರಿಗೆ ತರುವ ಮೊದಲು, ಅದರ ಪ್ರಯೋಜನ–ಹಾನಿ ಸಮೀಕ್ಷೆಯನ್ನು ಕಟ್ಟುನಿಟ್ಟಾಗಿ ನಡೆಸುವುದು ಅತ್ಯವಶ್ಯಕ.

ಭರವಸೆಯ ಹಿಂದಿರುವ ಅಪಾಯಗಳು

ಜಗತ್ತಿನ ಅನೇಕ ದೇಶಗಳಲ್ಲಿ FRS ಬಳಕೆಯನ್ನು ನಿಷೇಧಿಸಲಾಗಿದೆ, ಏಕೆಂದರೆ ಇದು ಸುಲಭವಾಗಿ ದುರುಪಯೋಗಗೊಳ್ಳುವ ಒಂದು ತಂತ್ರಜ್ಞಾನ. ಭಾರತದಲ್ಲಿ ದತ್ತಾಂಶ ರಕ್ಷಣೆ ವ್ಯವಸ್ಥೆಗಳು ದುರ್ಬಲವಾಗಿರುವುದರಿಂದ ಅಪಾಯಗಳು ಇನ್ನೂ ಹೆಚ್ಚು. ಸಂಗ್ರಹವಾದ ದತ್ತಾಂಶ, ಸೋರಿಕೆ, ಮಾರಾಟ ಅಥವಾ ಕಳವುಗೊಳ್ಳುವ ಸಾಧ್ಯತೆ ಅಧಿಕವಾಗಿರುತ್ತದೆ - ಇದರಿಂದ ವಿದ್ಯಾರ್ಥಿಗಳು ಮಾತ್ರವಲ್ಲ, ಶಿಕ್ಷಕರೂ ಅಪಾಯಕ್ಕೆ ಒಳಗಾಗಬಹುದು.

ಹಲವಾರು ಬಾರಿ ಸಾರ್ವಜನಿಕ ಸಂಸ್ಥೆಗಳ ಸಂಗ್ರಹಿಸಿದ ವೈಯಕ್ತಿಕ ಮಾಹಿತಿಗಳು ಅವಿಶ್ವಾಸಾರ್ಹ ವ್ಯಕ್ತಿಗಳಿಗೆ ಸೇರಿ ಅವಮಾನ ಮತ್ತು ಹಾನಿ ಉಂಟಾಗಿರುವ ಸನ್ನಿವೇಶಗಳು ಹಲವಾರಿವೆ. ಉದಾಹರಣೆಗೆ, ಸಿಸಿಟಿವಿ ದೃಶ್ಯಗಳು ಪಬ್ಲಿಕ್ ಡೊಮೇನ್‌ಗೆ ಸೋರಿಕೆಯಾದ ಘಟನೆಗಳು ಹಾಗು ಸರಕಾರ ಬೆಂಬಲಿತ ಡಿಜಿ ಯಾತ್ರಾ ಆಪ್‌ನಲ್ಲೂ ದತ್ತಾಂಶ ಉಲ್ಲಂಘನೆ ನಡೆದಿದೆ. ಮಕ್ಕಳ ಅತೀ ಸಂವೇದನಶೀಲ ಮಾಹಿತಿಗಳಲ್ಲೊಂದಾದ ಬಯೋಮೆಟ್ರಿಕ್ ಈ ಮಟ್ಟದಲ್ಲಿ ಸಂಗ್ರಹಿಸಿದಾಗ, ಅದರ ಸುರಕ್ಷತೆ ಬಗ್ಗೆ ಗಂಭೀರ ಅನುಮಾನಗಳು ಏಳುವುದು ಸಹಜ.

SSLC ಪರೀಕ್ಷಾ ಫಲಿತಾಂಶದ ದತ್ತಾಂಶ ಖಾಸಗಿ ಸಂಸ್ಥೆಗಳಿಗೆ ಮಾರಾಟವಾಗಿ, ಅದನ್ನು ಮಾರುಕಟ್ಟೆಯಲ್ಲಿ ಲಾಭಾಂಶಗಳಿಗೆ ಬಳಸುತ್ತಿರುವುದನ್ನು ನಾವು ನೋಡುತ್ತಲೇ ಇದ್ದೇವೆ. ಮುಖ ಗುರುತಿಸುವಿಕೆ ದತ್ತಾಂಶ ಅವಿಶ್ವಾಸಾರ್ಹ ವ್ಯಕ್ತಿಗಳಿಗೆ ಸಿಕ್ಕರೆ, ಅದು ಮಾನವ ಸಾಗಣೆದಾರರು, ಸೈಬರ್ ಅಪರಾಧಿಗಳು ಅಥವಾ ಲೈಂಗಿಕ ಹಿಂಸಾಚಾರಿಗಳಿಗೆ ವರದಾನವಾಗಬಹುದು. ಇದರ ಜೊತೆಗೆ, AI ಆಧಾರಿತ ಡೀಪ್‌ಫೇಕ್, ಇಮೇಜ್ ಮಾರ್ಫಿಂಗ್ ಮತ್ತು ಸೆಕ್ಸ್‌ಟೋರ್ಷನ್ ಪ್ರಕರಣಗಳು ಹೆಚ್ಚಾಗುತ್ತಿವೆ. ಅಂತರ್ರಾಷ್ಟ್ರೀಯ ವರದಿಗಳು ಡಿಜಿಟಲ್ ತಂತ್ರಜ್ಞಾನದ ದುರುಪಯೋಗದಿಂದ ಮಕ್ಕಳು ಬೆದರಿಕೆ, ಶೋಷಣೆ ಮತ್ತು ಆತ್ಮಹತ್ಯೆಯಂತಹ ಘೋರ ಪರಿಣಾಮಗಳಿಗೊಳಗಾಗುತ್ತಿರುವುದನ್ನು ತೋರಿಸುತ್ತವೆ

ಮಕ್ಕಳಿಗೆ ಸುರಕ್ಷಿತ ಸ್ಥಳಗಳ ಅಗತ್ಯತೆ

ಶಾಲೆಗಳು ಮಕ್ಕಳಿಗೆ ಸುರಕ್ಷಿತ ಸ್ಥಳವಾಗಿರಬೇಕಾಗಿದ್ದು, ಅಲ್ಲಿ ಅವರು ಕಲಿಯಲು, ತಮ್ಮನ್ನು ತಾವು ಅಭಿವ್ಯಕ್ತಿಸಲು ಮುಕ್ತ ವಾತಾವರಣವಿರಬೇಕು. ಆದರೆ FRS ಮೂಲಕ ದಿನನಿತ್ಯದ ನಿಗಾವಾಹಿ ತರಗತಿಯಲ್ಲಿ ಪ್ರತಿಯೊಂದು ಚಲನವಲನವನ್ನು ದಾಖಲಿಸುವ ಪರಿಸ್ಥಿತಿ ಉಂಟುಮಾಡುತ್ತದೆ. ತರಗತಿಯಲ್ಲಿ ಮಕ್ಕಳ ಸಹಜ ಚಟುವಟಿಕೆಗಳನ್ನು ಚಿತ್ರೀಕರಿಸಿದರೆ, ಅದು ಹೊರಗಿನ ಜಗತ್ತಿನಲ್ಲಿ ಬೆದರಿಕೆ ಹಾಕಲು ಅಥವಾ ವಂಚನೆಗೆ ಒಳಪಡಿಸಲು ಬಳಸಲ್ಪಡುವ ಜಾಲವಾಗುವ ಅಪಾಯವಿದೆ.

ಶಿಕ್ಷಕರೂ ಈ ಅಪಾಯದಿಂದ ದೂರವುಳಿಯುವುದು ಕಠಿಣವಾಗಿದೆ. ವಯಸ್ಕರೂ ಸಹ ಇಮೇಜ್ ಮಾರ್ಫಿಂಗ್ ಮತ್ತು ಸೆಕ್ಸ್‌ಟೋರ್ಷನ್ಗೆ ಬಲಿಯಾಗಿರುವ ಉದಾಹರಣೆಗಳಿವೆ. ಹೀಗಾಗಿ FRS ಶಿಕ್ಷಕ ವೃಂದಕ್ಕೂ ಜಾರಿಗೊಳಿಸುವುದರಿಂದ, ಅವರ ಮೇಲೂ ಅಪಾಯ ಹೆಚ್ಚುವುದು ಮಾತ್ರವಲ್ಲದೆ, ಶಿಕ್ಷಣ ವಾತಾವರಣ ಹದೆಗೆಡುವ ಸಾಧ್ಯತೆ ಹೆಚ್ಚುತ್ತದೆ.

ಜಾಗತಿಕ ಎಚ್ಚರಿಕೆಗಳು

FRS ಕುರಿತು ಕಾಳಜಿ ಕರ್ನಾಟಕಕ್ಕೆ ಮಾತ್ರ ಸೀಮಿತವಲ್ಲ. ಸಂಯುಕ್ತ ರಾಷ್ಟ್ರಗಳ ಶಿಕ್ಷಣ ಹಕ್ಕುಗಳ ವಿಶೇಷ ಪ್ರತಿನಿಧಿ, ಶಾಲೆಗಳಲ್ಲಿ ಇಂತಹ ತಂತ್ರಜ್ಞಾನಗಳನ್ನು ನಿಷೇಧಿಸಬೇಕೆಂದು ಸ್ಪಷ್ಟ ಶಿಫಾರಸ್ಸು ಮಾಡಿದ್ದಾರೆ. .ಐ ತಂತ್ರಜ್ಞಾನದ ಮುಂಚೂಣಿಯಲ್ಲಿರುವ ಚೀನಾ ಮತ್ತು ಅಮೆರಿಕಾದಂತಹ ದೇಶಗಳೂ ಸಹ ಶಾಲೆಗಳಲ್ಲಿ ಮುಖ ಗುರುತಿಸುವಿಕೆ ಬಳಕೆಯನ್ನು ಹಿಂತೆಗೆದುಕೊಳ್ಳುತ್ತಿವೆ ಅಥವಾ ನಿಯಂತ್ರಿಸುತ್ತಿವೆ.

ತಂತ್ರಜ್ಞಾನಕ್ಕಿಂತ ಮೀರಿ ಹೊಣೆಗಾರಿಕೆ

FRS ಹೇರಿಕೆಯ ಹಿಂದೆ ಶಾಲೆಗಳಲ್ಲಿ ಹೆಚ್ಚಿನ ಹೊಣೆಗಾರಿಕೆ ತರಬೇಕೆಂಬ ಉದ್ದೇಶವಿದೆ. ಆದರೆ ತಂತ್ರಜ್ಞಾನ ಆಧಾರಿತ “ತ್ವರಿತ ಪರಿಹಾರಗಳು” ಹೊಣೆಗಾರಿಕೆಯ ಭ್ರಮೆ ಸೃಶ್ಟಿಸುತ್ತದೆಯೇ ಹೊರತು ನಿಜವಾದ ಹೊಣೆಗಾರಿಕೆಯನ್ನಲ್ಲ.

ಶಿಕ್ಷಣದಲ್ಲಿ ಸರಿಯಾದ ಹೊಣೆಗಾರಿಕೆ ಬರಲು ಶಾಲೆ, ಶಿಕ್ಷಕರು ಮತ್ತು ಸಮುದಾಯಗಳ ನಡುವಿನ ಸಂಬಂಧ ಬಲಪಡಿಸಬೇಕು. ಈಗಾಗಲೇ ಶಾಲಾ ಅಭಿವೃದ್ಧಿ ಮತ್ತು ನಿರ್ವಹಣಾ ಸಮಿತಿಗಳು (SDMCs) ಅಸ್ತಿತ್ವದಲ್ಲಿವೆ. ಅವುಗಳನ್ನು ಶಕ್ತಗೊಳಿಸಿದರೆ ಡಿಜಿಟಲ್ ನಿಗಾವಾಹಿ ವ್ಯವಸ್ಥೆಗಿಂತ ಪರಿಣಾಮಕಾರಿ ಸ್ಥಳೀಯ ಹೊಣೆಗಾರಿಕೆ ನಿರ್ಮಾಣವಾಗಬಹುದು. ಶಿಕ್ಷಕರು ಮತ್ತು ಪೋಷಕರ ಸಾಮರ್ಥ್ಯವರ್ಧನೆಗೆ ಹೂಡಿಕೆ ಮಾಡಿದರೆ, ಅದು ಹೊಣೆಗಾರಿಕೆಯನ್ನು ಹೆಚ್ಚಿಸುವುದರ ಜೊತೆಗೆ ಶಾಲೆ–ಸಮುದಾಯದ ಸಹಭಾಗಿತ್ವವನ್ನು ಬಲಪಡಿಸುತ್ತದೆ—ಇದನ್ನು ಯಾವ ಆಲ್ಗಾರಿದಮೂ ಪ್ರತಿಸ್ಥಾಪಿಸಲಾಗುವುದಿಲ್ಲ.

ಎಡ್ಟೆಕ್‌ನಲ್ಲಿ ಮುನ್ನೆಚ್ಚರಿಕೆ ಅಗತ್ಯ

ಶಿಕ್ಷಣದಲ್ಲಿ ಡಿಜಿಟಲ್ ಪರಿಹಾರಗಳ ಆಕರ್ಷಣೆಯ ನಡುವೆ, ಅವು ಹೊತ್ತಿರುವ ಅಪಾಯಗಳನ್ನು ಬಹಳಷ್ಟು ಕಡೆಗಣಿಸಲಾಗುತ್ತಿದೆ. FRS ನಂತಹ ತಂತ್ರಜ್ಞಾನವನ್ನು ಜಾರಿಗೊಳಿಸುವ ಮೊದಲು, ನೀತಿನಿರ್ಧಾರಕರು ವೆಚ್ಚ, ಅಪಾಯ ಮತ್ತು ದೀರ್ಘಕಾಲೀನ ಪರಿಣಾಮಗಳನ್ನು ಸೂಕ್ಷ್ಮವಾಗಿ ಅಳೆಯಬೇಕು.

ಕೇಳಬೇಕಾದ ಕೆಲವು ಪ್ರಶ್ನೆಗಳು:

  • ಈ ತಂತ್ರಜ್ಞಾನವನ್ನು ಧೀರ್ಗಾವಧಿಗೆ ಪ್ರಯೋಗಾತ್ಮಕವಾಗಿ ಬಳಸಿಕೊಂಡು, ಅಡಗಿರುವ ಅಪಾಯಗಳನ್ನು ಗುರುತಿಸಿರುವರೇ?

  • ದುರುಪಯೋಗ, ಮಾರಾಟಗಾರರ ಅವಲಂಬನೆ ಅಥವಾ ವ್ಯವಸ್ಥೆಯ ವೈಫಲ್ಯವನ್ನು ತಡೆಯಲು ಪರಿಣಾಮಕಾರಿ ಭದ್ರತಾ ಕ್ರಮಗಳಿವೆಯೇ?

  • ಇದನ್ನು ಎಲ್ಲಾ ಶಾಲೆಗಳಿಗೂ ಸಮಾನವಾಗಿ ಹಾಗೂ ದೀರ್ಘಕಾಲಿಕವಾಗಿ ಜಾರಿಗೊಳಿಸುವುದು ಸಾಧ್ಯವೇ?

ಭಾರತ ಸರ್ಕಾರ ಪ್ರೋತ್ಸಾಹಿಸುತ್ತಿರುವ ಡಿಜಿಟಲ್ ಪಬ್ಲಿಕ್ ಇನ್‌ಫ್ರಾಸ್ಟ್ರಕ್ಚರ್ (DPI) ಮತ್ತು ಮುಕ್ತ ಮೂಲ ಸೋಫ್ಟ್‌ವೇರ್ (FOSS) ದಾರಿ ತೋರಿಸುವಂತಿವೆ. ಇವು ಸಾರ್ವಜನಿಕ ಸ್ವಾಮ್ಯದಲ್ಲಿರುವ, ಪಾರದರ್ಶಕ ಹಾಗೂ ಹೊಣೆಗಾರಿಕೆಯ ವ್ಯವಸ್ಥೆಗಳನ್ನು ಒದಗಿಸುತ್ತವೆ. ಆದರೆ ಖಾಸಗಿ ಕಂಪನಿಗಳ ಹಿಡಿತದಲ್ಲಿರುವ ತಂತ್ರಜ್ಞಾನಗಳು, ಶಾಲೆಗಳನ್ನು ಆರ್ಥಿಕ ನಷ್ಟಕ್ಕೂ, ದುರುಪಯೋಗಕ್ಕೂ ಒಳಪಡಿಸುವ ಅಪಾಯವನ್ನು ಉಂಟುಮಾಡಬಹುದು.

ಶಿಕ್ಷಣದಲ್ಲಿ ತಂತ್ರಜ್ಞಾನದ ಪಾತ್ರವನ್ನು ಮರುಪರಿಶೀಲಿಸಬೇಕು

ಮುಖ ಗುರುತಿಸುವಿಕೆ ವ್ಯವಸ್ಥೆಗಳು ದಕ್ಷತೆಯ ಭರವಸೆಯನ್ನು ನೀಡಬಹುದಾದರೂ, ಅವುಗಳಲ್ಲಿ ಅಡಗಿರುವ ಅಪಾಯಗಳು ಅಪಾರವಾಗಿವೆ — ವಿಶೇಷವಾಗಿ ನಮ್ಮ ಸಮಾಜದ ಅತೀ ಸಂವೇದನಶೀಲ ಗುಂಪಾದ ಮಕ್ಕಳಿಗೆ. ಶಿಕ್ಷಕರಾಗಿ ನಾವು ಈ ರೀತಿಯ ಸಾಧನಗಳು ನಮ್ಮ ತರಗತಿಗಳಲ್ಲಿ ಸ್ಥಾನ ಪಡೆಯಬೇಕೇ ಎಂಬುದನ್ನು ತೀವ್ರವಾಗಿ ಪರಿಶೀಲಿಸಬೇಕಿದೆ.

ಶಿಕ್ಷಣವು ವಿಶ್ವಾಸ, ಸುರಕ್ಷತೆ ಮತ್ತು ಮಾನವೀಯ ಸಂಪರ್ಕಗಳ ಮೇಲೆ ಬೆಳೆಯುತ್ತದೆ. ಹೊಣೆಗಾರಿಕೆಯನ್ನು AI ನಿಗಾವಾಹಿಗೆ ಒಪ್ಪಿಸುವ ಬದಲಿಗೆ, ಶಾಲೆಗಳಿಗೆ ಬೆಂಬಲವಾಗಿರುವ ಸಾಮಾಜ ಮತ್ತು ಸಮುದಾಯಗಳನ್ನು ಬಲಪಡಿಸಬೇಕಾಗಿದೆ. ನಮ್ಮ ಮಕ್ಕಳ ಗೌರವ, ಗೌಪ್ಯತೆ ಮತ್ತು ಸುರಕ್ಷತೆ ನಮ್ಮ ಅತಿ ಮುಖ್ಯ ಆದ್ಯತೆಯಾಗಿರಬೇಕು.

 

Focus Areas
Resource Type
ನಮ್ಮ ಶಾಲೆಗಳಲ್ಲಿ ಮುಖ ಗುರುತಿಸುವಿಕೆ ತಂತ್ರಜ್ಞಾನ ಅಗತ್ಯವೇ?